ಚರ್ಚ್ -
ಕ್ರೈಸ್ತ ಧರ್ಮಸಭೆಗೂ ಅದು ಇರುವ ಕಟ್ಟಡಕ್ಕೂ ಇರುವ ಹೆಸರು. ಚರ್ಚ್ ಪದದ ವ್ಯುತ್ಪತ್ತಿ ಸ್ವಾರಸ್ಯವಾಗಿದೆ. ಕಾಹಾಲ್ ಎಂಬ ಹೀಬ್ರು ಪದ ಗ್ರೀಕ್ ಭಾಷೆಯಲ್ಲಿ ಎಕ್ಲೇಸಿಯಾ ಎಂದಾಗಿ ಇಂಗ್ಲಿಷಿನಲ್ಲಿ ಚರ್ಚ್ ಎಂದಾಯಿತು. ಕಾಹಾಲ್ ಎಂದರೆ ದೇವರ ಜನತೆಯ ಒಂದು ಸಭೆ; ದೇವರು ಕರೆ ನೀಡಿದುದರಿಂದ ಈ ಜನತೆ ಒಂದಾಗಿ ಸೇರಿರುವುದು. ಈ ಜನತೆಯ ಐಕ್ಯ, ಉದ್ದೇಶ, ದೇವರ ಉಪಾಸನೆ, ಇವೆಲ್ಲ ಅರ್ಥಗಳು ಮುಖ್ಯವಾಗಿ ಕಾಹಾಲ್ ಪದದಲ್ಲಿ ಅಡಕವಾಗಿವೆ. 

ಈ ಲೇಖನದ ವಿನ್ಯಾಸ ಹೀಗಿದೆ:
1. ಚರ್ಚ್ (ಧರ್ಮಸಭೆ)ಪದದ ಅರ್ಥ
2. ಚರಿತ್ರೆ
3. ಕ್ರೈಸ್ತಧರ್ಮದ ತಿರುಳು
4. ಚರ್ಚ್ ವಾಸ್ತು.

		1. ಚರ್ಚ್ (ಧರ್ಮಸಭೆ) ಪದದ ಅರ್ಥ: ಸೈದ್ಧಾಂತಿಕವಾಗಿ, ಏಕೈಕವಾಗಿರುವ ಕ್ರೈಸ್ತ ಧರ್ಮಸಭೆ ಅವಿಭಾಜ್ಯವಾಗಿದೆ. ಆದರೆ ವಾಸ್ತವಾಗಿ ಹಲವು ಕ್ರೈಸ್ತ ಪಂಥಗಳಿವೆ. ಇವುಗಳಲ್ಲಿ ಆಂತರಿಕ ಐಕ್ಯ ಹಾಗೂ ಗಾತ್ರದ ದೃಷ್ಟಿಯಿಂದ ರೋಮನ್ ಕ್ಯಾತೊಲಿಕ್ ಚರ್ಚಿಗೆ ಪ್ರಥಮ ಸ್ಥಾನ ನಿಲ್ಲಬೇಕು, (ಇದರ ಪರಮ ಧರ್ಮಾಧಿಕಾರಿ ರೋಮ್‍ನಲ್ಲಿರುವುದರಿಂದಲೂ ಇತರ ಪ್ರಾದೇಶಿಕ ಚರ್ಚುಗಳಿಂದ ಇದು ಭಿನ್ನವಾಗಿದೆ ಎಂದು ಸೂಚಿಸುವ ಸೌಲಭ್ಯಕ್ಕಾಗಿಯೂ ರೋಮನ್ ಪದ ಇಲ್ಲಿ ಬಳಕೆಯಲ್ಲಿದೆ. ಎಲ್ಲ ದೇಶ, ಕಾಲ, ಜನಾಂಗದವರು ಈ ಚರ್ಚಿನ ಸದಸ್ಯರಾಗಬಹುದು, ಆಗಿದ್ದಾರೆ. ಕ್ಯಾತೊಲಿಕ್ ಎಂದರೆ ಇದೆ ಅರ್ಥ). ಅನಂತರ ಪೋಪ್ ಗುರುವಿನ ಅಧಿಕಾರ ಪಾರಮ್ಯವೊಂದನ್ನುಳಿದು ಇತರ ಧರ್ಮ ಸಿದ್ಧಾಂತ, ಆಚಾರಗಳಲ್ಲಿ ಹೆಚ್ಚಿನ ಅಂಶ ಕ್ಯಾತೊಲಿಕ್ ಚರ್ಚಿನ ನಿಲುವನ್ನು ತಳೆದ ಈಸ್ಟರ್ನ್ ಅರ್ಥೋಡಾಕ್ಸ್ ಚರ್ಚ್. ಇನ್ನು ಕ್ಯಾತೋಲಿಕ್ ಚರ್ಚಿನ ನಿಲುವಿನೊಡನೆ ಹೆಚ್ಚು ಮೂಲಭೂತವಾದ ಭಿನ್ನಾಭಿಪ್ರಾಯಗಳನ್ನುಳ್ಳ ಮತ್ತು ತಮ್ಮ ತಮ್ಮೊಳಗೆ ಚಿಕ್ಕಪುಟ್ಟ ವಿವರಗಳಲ್ಲಿ ವೈಷಮ್ಯವಿದ್ದ ವಿವಿಧ ಪ್ರಾಟೆಸ್ಟೆಂಟ್ ಚರ್ಚ್‍ಗಳಿವೆ. ಕೊನೆಯದಾಗಿ ತೀರ ಇತ್ತೀಚಿನ, ಸ್ವತಂತ್ರವಾದ ಸನಾತನ ಕ್ರೈಸ್ತ ನಂಬಿಕೆಗಳನ್ನು ಇಟ್ಟುಕೊಂಡಿರದ ಘಟಕಗಳಿವೆ. ಈ ಲೇಖನದಲ್ಲಿ ಮುಖ್ಯವಾಗಿ ಕ್ಯಾತೊಲಿಕ್ ಚರ್ಚನ್ನು ಕುರಿತಂತೆ ವಿವರಣೆಗಳಿವೆ.
ಧರ್ಮಸಭೆಯಲ್ಲಿ ಮುಖ್ಯವಾದ ಮತ್ತು ಇತರ ನಂಬಿಕೆಗಳಿಗೆ ತಳಹದಿ ಪ್ರಾಯವಾದ ಎರಡು ನಂಬಿಕೆಗಳೆಂದರೆ 1 ದೇವರು ಒಬ್ಬನೇ. ಅವನಲ್ಲಿ ಮೂವರು ವ್ಯಕ್ತಿಗಳ ಐಕ್ಯರು-ಪಿತನಾದ ದೇವರು, ಸುತನಾದ ದೇವರು ಮತ್ತು ಪವಿತ್ರಾತ್ಮನಾದ ದೇವರು. ಇವರಲ್ಲಿ ಒಬ್ಬೊಬ್ಬನೂ ದೇವರೇ. ಆದರೆ ದೇವರು ಮೂವರಲ್ಲ ಒಬ್ಬನೇ. 2. ಸುತನಾದ ದೇವರು ಪತಿತ ಮಾನವ ಕುಲದ ರಕ್ಷಣೆಗಾಗಿ ಮನುಷ್ಯ ರೂಪವನ್ನು ಧರಿಸಿ ನಿಜವಾದ ದೇವರೂ ನಿಜವಾದ ಮನುಷ್ಯನೂ ಆಗಿ ಕಷ್ಟಸಾವುಗಳನ್ನಪ್ಪಿ ಜೀವಂತವಾಗಿ ಎದ್ದ. ಇವನೇ ನಜರೇತಿನ ಯೇಸು-ಯೇಸು ಕ್ರಿಸ್ತ.

ನಂಬಿಕೆ, ಆಚಾರ, ನೀತಿ, ನಡತೆ ಸೇರಿದಂತೆ ಎಲ್ಲ ಧಾರ್ಮಿಕ ವಿಷಯಗಳಲ್ಲಿ ಪ್ರಮಾಣ ಸ್ವರೂಪಿ ಹಾಗೂ ವಿಧಾಯಕ ಮೂಲವೆಂದರೆ ಪವಿತ್ರ ಗ್ರಂಥವಾದ ಬೈಬಲ್ ಮತ್ತು ಧರ್ಮಸಭೆಯ ಸಂಪ್ರದಾಯ. ಈ ಮೂಲಕ ದೇವರು ಸ್ವತಃ ತನ್ನ ಮತ್ತು ತನ್ನ ಸೃಷ್ಟಿಯನ್ನು ಕುರಿತು ಶಾಶ್ವತ ಸತ್ಯಗಳನ್ನು ಮಾನವನಿಗೆ ತಿಳಿಸುತ್ತಾನೆ. ದೇವರನ್ನು ಪ್ರೀತಿಸು ಮತ್ತು ನಿನ್ನಂತೆ ಪರರನ್ನು ಪ್ರೀತಿಸು ಎಂಬುದರಲ್ಲಿ ಕ್ರೈಸ್ತಧರ್ಮ ಸ್ಥೂಲವಾಗಿ ಅಡಕವಾಗಿದೆ ಎನ್ನಬಹುದು.

ಕ್ರೈಸ್ತರು ಬಹಿರಂಗವಾಗಿ, ಸಾಮೂಹಿಕವಾಗಿ ದೇವರನ್ನು ಆರಾಧಿಸುತ್ತಾರೆ. (ವೈಯಕ್ತಿಕ ಖಾಸಗಿ ಪ್ರಾರ್ಥನೆಯೂ ಇದೆ) ಈ ಆರಾಧನೆ ಮುಖ್ಯವಾಗಿ ದಿವ್ಯ ಬಲಿಪೂಜೆಯ (ಹೋಲಿ ಸ್ಯಾಕ್ರಿಫೈಸ್ ಆಫ್ ದಿ ಮಾಸ್) ರೂಪದಲ್ಲಿ ನಡೆಯುತ್ತದೆ. ತನ್ನ ಸದಸ್ಯರಿಗೆಂದು ಧರ್ಮಸಭೆ ದೇವರ ಮಾತಿನ ಬೋಧನೆಯನ್ನೂ ಕೃಪಾವಾಹಿನಿಯಾದಂಥ ಸಂಸ್ಕಾರಗಳನ್ನೂ ಒದಗಿಸುತ್ತದೆ. ಸಂಸ್ಕಾರಗಳು ಏಳು.

		ಬಲಿಪೂಜೆಯನ್ನು ಅರ್ಪಿಸುವ ರೀತಿಯಲ್ಲಾಗಲಿ, ಸಂಸ್ಕಾರಗಳ ಸಂಖ್ಯೆ ಅವುಗಳ ಪ್ರಧಾನ ಕ್ರಮ. ಇವುಗಳೆಲ್ಲವನ್ನು ಉಪಯೋಗಿಸುವ ಬಗೆಗಿರುವ ಕಡ್ಡಾಯಗಳಲ್ಲಾಗಲಿ ವಿವಿಧ ಚರ್ಚುಗಳಲ್ಲಿ ಏಕರೂಪವಿಲ್ಲ.

ಧರ್ಮಸಭೆಯ ಆದೇಶದಂತೆ ಸದಸ್ಯರು ದೇವರಿಗೆ ಸಲ್ಲತಕ್ಕಂಥ ಗೌರವ, ಪೂಜಾದಿಗಳಲ್ಲಿ ನಿಷ್ಠೆ ಇಟ್ಟುಕೊಳ್ಳಬೇಕು. ಮೂಲಭೂತವಾಗಿ ತಮ್ಮ ಜೀವನದಲ್ಲಿ, ನಡೆನುಡಿಯಲ್ಲಿ, ಯೇಸುಕ್ರಿಸ್ತನನ್ನು ಅನುಸರಿಸುವುದೇ ತಮ್ಮ ಮುಖ್ಯ ಗುರಿಯೆಂದು ತಿಳಿದುಕೊಂಡು, ಲೌಕಿಕ-ಧಾರ್ಮಿಕದಲ್ಲಿ ಧಾರ್ಮಿಕದ ಪಾರಮ್ಯ, ಸ್ವಾತಂತ್ರ್ಯ, ಮಾನವ ಪ್ರಾಣ, ಶರೀರವನ್ನು ಪೂಜ್ಯಭಾವದಿಂದ ಕಾಣುವುದು, ಪರರಿಗೆ ನ್ಯಾಯ ನೀತಿಯುಕ್ತವಾಗಿ ಸ್ಥಾಪಿತವಾದ ಲೌಕಿಕ ಅಧಿಕಾರವನ್ನು ಒಪ್ಪುವುದು-ಇವೇ ಮೊದಲಾದ ತತ್ತ್ವಗಳ ಮೇಲೆ ರಚಿತವಾದ ನೀತಿ ನಿಯಮಾವಳಿಗಳನ್ನು ಕ್ರೈಸ್ತರು ಅವಲಂಬಿಸಬೇಕು.

ಧರ್ಮಸಭೆಯ ಸಂಸ್ಥಾಪಕರಾಗಿದ್ದ ಯೇಸುಕ್ರಿಸ್ತನ ಹನ್ನೆರಡು ಮಂದಿ ಶಿಷ್ಯರ ಉತ್ತರಾಧಿಕಾರಿಗಳಾಗಿ ಬಂದ ಧರ್ಮಾಧ್ಯಕ್ಷರ (ಬಿಷಪ್) ಸಭೆ ಧರ್ಮಸಭೆಯಲ್ಲಿ ಅಧಿಕಾರ ನಡೆಸುತ್ತದೆ. ಯೇಸುಕ್ರಿಸ್ತ ಸೇಂಟ್ ಪೀಟರನನ್ನು ತನ್ನ ಶಿಷ್ಯರಲ್ಲಿ ಮುಖಂಡನೆಂದು ನೇಮಿಸಿದ. ಸೇಂಟ್ ಪೀಟರನ ಉತ್ತರಾಧಿಕಾರಿಯಾಗಿದ್ದ ರೋಮ್ ನಗರದ ಧರ್ಮಾಧ್ಯಕ್ಷ. ಪೋಪ್ ಜಗದ್ಗುರುಗಳು, ಧರ್ಮಸಭೆಯಲ್ಲಿ ಸರ್ವಶ್ರೇಷ್ಠ ಅಧಿಕಾರವನ್ನು ಪಡೆದಿರುತ್ತಾರೆ. ಧರ್ಮಾಧ್ಯಕ್ಷರ ಆಡಳಿತ ಕ್ಷೇತ್ರವಾದ ಧರ್ಮಕ್ಷೇತ್ರವನ್ನು ವಿಚಾರಣೆ (ಪ್ಯಾರಿಷ್) ಎಂಬ ಚಿಕ್ಕ ಘಟಕಗಳಾಗಿ ವಿಂಗಡಿಸಿರುತ್ತಾರೆ. ಇದನ್ನು ಧರ್ಮಗುರುಗಳು ನಡೆಸುತ್ತಾರೆ.

ಧರ್ಮಸಭೆ ತನ್ನ ಸದಸ್ಯರನ್ನು ನಂಬಿಕೆ, ನೀತಿ ಆಚಾರ ಇತ್ಯಾದಿ ವಿಚಾರಗಳಲ್ಲಿ ಧಾರ್ಮಿಕ ಹಾಗೂ ಲೌಕಿಕ ಶಿಕ್ಷಣ ಕ್ಷೇತ್ರದಲ್ಲಿ ಬೋಧಿಸುವುದಲ್ಲದೆ ತನ್ನಲ್ಲಿರುವ ದಿವ್ಯಜ್ಞಾನ ಇತರರಿಗೂ ಲಭಿಸುವಂತೆ ಮಾಡಲು ಧರ್ಮಪ್ರಚಾರ ಕಾರ್ಯದಲ್ಲಿಯೂ ತೊಡಗಿರುತ್ತಾರೆ. ಅಲ್ಲದೆ ಶಿಕ್ಷಣ, ದಲಿತೋದ್ಧಾರ, ಸಮಾಜಸೇವೆಗಳನ್ನು ಸಂಸ್ಥೆಗಳ, ವೈಯಕ್ತಿಕ ಕಾರ್ಯಕರ್ತರ ಮೂಲಕ ನೆರವೇರಿಸುತ್ತದೆ. ಲೌಕಿಕ ಮಂಡಲವನ್ನು ಪೂತಗೊಳಿಸಿ, ಅದನ್ನು ಪರಮಾತ್ಮನತ್ತ ಒಯ್ಯುವ ಗುರಿಯನ್ನಿಟ್ಟುಕೊಂಡು ಲೋಕದಲ್ಲಿರುವ ಎಲ್ಲ ಮಾನವೀಯ ಹಿತಾಸಕ್ತಿಗಳನ್ನೂ ಅಭಿವೃದ್ಧಿಗೊಳಿಸುತ್ತ ನ್ಯಾಯ ಪಕ್ಷಪಾತವುಳ್ಳ ಶಾಂತಿ ಸೌಹಾರ್ದ ಪರವಾದ, ಸಹೋದರಭಾವ ತುಂಬಿದ ವಿಶ್ವ ಸಮಾಜದತ್ತ ಸರಿಯುವ ಎಲ್ಲ ವಿಧದ ಚಟುವಟಿಕೆಗಳಲ್ಲಿ ಸ್ಥಳೀಯ ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಭಾಗವಹಿಸುತ್ತದೆ.

ಧಾರ್ಮಿಕರು ಎನ್ನಲಾದ ಸಂನ್ಯಾಸ ಸ್ವೀಕರಿಸಿದ ಪುರುಷರ ಸಂಘಗಳು, ಸ್ತ್ರೀಯರ ಸಂಘಗಳು ಧರ್ಮಸಭೆಯಲ್ಲಿವೆ ; ಲೌಕಿಕ ಗುರಿಗಳನ್ನು ಸಂಪೂರ್ಣವಾಗಿ ತ್ಯಜಿಸಿ, ಬ್ರಹ್ಮಚರ್ಯ, ಬಡತನ, ವಿಧೇಯತೆ ಎಂಬ ಮೂರೂ ಧರ್ಮಪ್ರತಿಜ್ಞೆಗಳಿಂದ ಬದ್ಧರಾಗಿ ಧ್ಯಾನ, ಪರೋಪಕಾರ ಮತ್ತು ಸಾಮಾನ್ಯವಾಗಿ ಧರ್ಮಸಭೆಯ ಲೋಕಹಿತದ ಯಾವುದೇ ಕಾರ್ಯದಲ್ಲಿ ಸಮರ್ಪಕಭಾವದಿಂದ ಇವರು ಕ್ರಿಯಾಶೀಲರಾಗುತ್ತಾರೆ. ಇವರಲ್ಲಿರುವ ವಿವಿಧ ಪಂಗಡಗಳು ತಮ್ಮ ಸಂಸ್ಥಾಪಕರ ವಿಶಿಷ್ಟ ಭಕ್ತಿಪರಂಪರೆ, ಕಾರ್ಯಾಚರಣೆಯ ರೂಢಿಗಳನ್ನು ಉಳಿಸಿಕೊಂಡಿವೆ.

	2. ಚರಿತ್ರೆ : ವಿಶ್ವದಾದಿಯಿಂದ ಇದ್ದ ಸಜ್ಜನರ ಸಮುದಾಯವನ್ನು ಅದರಲ್ಲೂ ದೇವರು ತನ್ನ ಜನತೆಯೆಂದು ಆರಿಸಿದ ಯೆಹೂದ್ಯ ಜನಾಂಗವನ್ನು ಧರ್ಮಸಭೆ ಪರಿಪೂರ್ಣಗೊಳಿಸುತ್ತದೆ ಮತ್ತು ಮುಂದುವರಿಸುತ್ತದೆ.

ಯೇಸುಕ್ರಿಸ್ತನ ಜೀವನ, ಬೋಧನ ಕಾರ್ಯಗಳಲ್ಲಿ ಮತ್ತು ಔಪಚಾರಿಕವಾಗಿ ಮರಣ ಮತ್ತು ಪುನರುತ್ಥಾನಗಳಲ್ಲಿ ಧರ್ಮಸಭೆಯ ಉಗಮವನ್ನು ಕಾಣಬಹುದು. ಪುನರುತ್ಥಾನದ ಬಳಿಕ ಐವತ್ತನೆಯ ದಿನ ಯೇಸುಕ್ರಿಸ್ತ ವಚನವಿತ್ತಂತೆ ಪವಿತ್ರಾತ್ಮ ತುಂಬುಪ್ರಮಾಣದಲ್ಲಿ ಯೇಸುವಿನ ತಾಯಿ ಮೇರಿ ಮತ್ತು ಯೇಸುವಿನ ಶಿಷ್ಯರ ಮೇಲೆ ಇಳಿದ. ಧರ್ಮಸಭೆ ಬಹಿರಂಗವಾಗಿ ಲೋಕ ತಿಳಿಯುವಂತೆ ಸಂಸ್ಥಾಪನೆಯಾದ ದಿನವಿದು. ಅಂದು ಧರ್ಮಸಭೆಯ ಮೊತ್ತ ಮೊದಲ ಘಟಕ ಈ ಶಿಷ್ಯರ ಸುತ್ತ ರಚಿತವಾಯಿತು. ಈ ಶಿಷ್ಯರು ಲೋಕದಲ್ಲೆಲ್ಲ-ಮುಖ್ಯವಾಗಿ ಅಂದಿನ ರೋಮನ್ ಸಾಮ್ರಾಜ್ಯದಲ್ಲಿ-ಕ್ರಿಸ್ತನ ಸಂದೇಶವನ್ನು ಹರಡಿದರು. ಇವರಲ್ಲಿ ಸೆಂಟ್ ತಾಮಸ್ ಎಂಬಾತ ಭಾರತಕ್ಕೆ ಬಂದಿದ್ದನೆಂಬ ಬಲವಾದ ಪ್ರತೀತಿ ಇದೆ.
ತನ್ನ ಶೈಶವಾಸ್ಥೆಯಲ್ಲಿ ಅಂದಿನ ರೋಮನ್ ಸಾಮ್ರಾಜ್ಯದಲ್ಲಿ ಮಾತ್ರ ಹರಡಿದ ಧರ್ಮಸಭೆ ಸುಮಾರು ಮೂರು ಶತಕಗಳ ವರೆಗೆ ಸಾಮ್ರಾಜ್ಯದ ಅಧಿಕಾರಿಗಳ ಕೈಯಲ್ಲಿ ತೀವ್ರ ವಿರೋಧವನ್ನೂ ಉಗ್ರಹಿಂಸೆಗಳನ್ನು ಸಹಿಸಬೇಕಾಯಿತು. ಕ್ರಿ.ಶ,. 312ರಲ್ಲಿ ಚಕ್ರಾಧಿಪತಿ ಕಾನ್‍ಸ್ಟಂಟೈನ್ ಕ್ರೈಸ್ತಧರ್ಮವನ್ನು ಸ್ವೀಕರಿಸಿ ಕ್ರೈಸ್ತರಿಗೆ ಧರ್ಮ, ನಂಬಿಕೆ, ಆಚರಣೆಗಳಲ್ಲಿ ಸ್ವಾತಂತ್ರ್ಯವನ್ನು ಕಲ್ಪಿಸಿಕೊಟ್ಟುದುದರ ಫಲವಾಗಿ ಕ್ರೈಸ್ತರ ಸಂಖ್ಯೆ ತೀವ್ರ ಹೆಚ್ಚಳವನ್ನು ಪಡೆಯಿತು. ಪರಿಣಾಮವಾಗಿ ಶ್ರದ್ಧೆ, ಭಕ್ತಿ ಇಳಿಮುಖವಾಯಿತು. ನಂಬಿಕೆಯ ವಿಚಾರಗಳಲ್ಲಿ ಉಂಟಾದ ಹಲವು ವಿವಾದಗಳನ್ನು ಬಗೆಹರಿಸಲು ತಪ್ಪು ಅಭಿಪ್ರಾಯಗಳನ್ನು ಖಂಡಿಸಲು ಸನಾತನ ನಂಬಿಕೆಗಳನ್ನು ಖಚಿತವಾಗಿ ನಮೂದಿಸಲು ಸರ್ವಧರ್ಮಾಧ್ಯಕ್ಷರ ಮಹಾಸಭೆಗಳು ಅಧಿವೇಶನಗಳನ್ನು ನಡೆಸಿದುದು ಇದೇ ಕಾಲದಲ್ಲಿ. ಸಿರಿಯ, ಈಜಿಪ್ಟ್, ಯೂರೋಪುಗಳಲ್ಲಿ ಆರಂಭವಾದ ಸಂನ್ಯಾಸಕ್ರಮದ ಮಠಗಳು ಮತ್ತು ಸಂನ್ಯಾಸಿಗಳು ಧರ್ಮಸಭೆಯ ವಿಶಿಷ್ಟ ಗುಣಗಳಲ್ಲೊಂದಾದ ಪಾವಿತ್ರ್ಯದ ಸಾಕ್ಷಿಗಳಾದುವಲ್ಲದೆ ನಾಗರಿಕತೆ, ವಿದ್ಯಾಪ್ರಸಾರಗಳಿಗೂ ತಮ್ಮ ಉತ್ತಮ ಕೊಡುಗೆಯನ್ನು ನೀಡಿದವು. 8ನೆಯ ಶತಮಾನ ಮುಗಿಯುವಷ್ಟರಲ್ಲಿ ಇಡಿ ಯೂರೋಪು ಖಂಡ ಕ್ರೈಸ್ತಧರ್ಮವನ್ನು ಸ್ವೀಕರಿಸಿತು.

ಇತ್ತ ಕಾನ್‍ಸ್ಟ್ಯಾಂಟಿನೋಪಲಿನ ಧರ್ಮಾಧ್ಯಕ್ಷರನ್ನು ಅವಲಂಬಿಸಿ ಗ್ರೀಕ್ ಕ್ರೈಸ್ತರಿಗೂ ರೋಮ್ ನಗರದ ಧರ್ಮಾಧ್ಯಕ್ಷರನ್ನು ಅವಲಂಬಿಸಿದ ಲ್ಯಾಟಿನ್ ಕ್ರೈಸ್ತರಿಗೂ ಉಂಟಾದ ಭಿನ್ನಾಭಿಪ್ರಾಯ 1054ರಲ್ಲಿ ಸಂಪೂರ್ಣ ಒಡಕಿನಲ್ಲಿ ಪರ್ಯವಸಾನಗೊಂಡಿತು. ಇಂದಿಗೂ ಕಾಣುತ್ತಿರುವ ಕ್ಯಾತೊಲಿಕ್-ಆರ್ಥೋಡಾಕ್ಸ್ ಒಡಕು ಇದೇ. ಕ್ಯಾತೊಲಿಕರ ದೃಷ್ಟಿಯಲ್ಲಿ ಧರ್ಮಸಭೆ ಅವಿಭಾಜ್ಯವಾಗಿ ಉಳಿದಿದೆಯಾದರೂ ಕ್ರೈಸ್ತ ಸಮಾಜಕ್ಕೆ ಈ ಒಡಕಿನಿಂದಾಗಿ ಆಪಾರ ನಷ್ಟ ಉಂಟಾಯಿತು ಎಂಬ ಮಾತಂತೂ ನಿಜ. 

ಪಾಶ್ಚಾತ್ಯ ಧರ್ಮಸಭೆ ವೈಭವದ ಶಿಖರಕ್ಕೇರಿದುದು ಮಧ್ಯಯುಗದಲ್ಲಿ ಬಾಹ್ಯಪ್ರಭಾವ, ಸಮೃದ್ಧಭಕ್ತಿ, ಭವ್ಯ ದೇವಾಲಯಗಳು, ದೈವಶಾಸ್ತ್ರಸಂಬಂಧಿ ಸಂಹಿತೆಗಳು, ಅಸಂಖ್ಯಾತ ಸಂನ್ಯಾಸಿ ಮಠಗಳು, ಜೊತೆಗೆ ಧರ್ಮಯುದ್ಧಗಳು ಇಂಕ್ವಿಸಿಷನ್, ಪೋಪ್ ಅರಸುಗಳ ನಡುವೆ ಪೈಪೋಟಿ ಇವು ಈ ಯುಗದಲ್ಲಿ ಕಂಡುಬಂದವು. ಹದಿಮೂರನೆಯ ಶತಮಾನದಲ್ಲಿ ಕ್ರೈಸ್ತಧರ್ಮದ ಪ್ರಭಾವ ಜನಜೀವನದ ಎಲ್ಲ ಶಾಖೆಗಳಲ್ಲಿ ಪ್ರಸರಿಸಿತು. ಪ್ಯಾರಿಸ್, ಆಕ್ಸ್‍ಫರ್ಡ್ ಮತ್ತಿತರ ವಿಶ್ವವಿದ್ಯಾನಿಲಯಗಳ ಸ್ಥಾಪನೆಯಾಯಿತು. ಶಿಲ್ಪ, ಚಿತ್ರ, ಕಾವ್ಯಗಳಲ್ಲಿ ನವಚೇತನ ಕಂಡುಬಂತು ; ಅಸಿಸಿಯ ಫ್ರಾನ್ಸಿಸ್, ತಾಮಸ್ ಆಕ್ವಿನಸ್ ಇಂಥ ಮಹಾತ್ಮರ ಹೊಸ ಸಂನ್ಯಾಸ ಸಂಸ್ಥೆಗಳು ಹುಟ್ಟಿದವು. ಇದೇ ಕಾಲದಲ್ಲಿ ಧರ್ಮಸಭೆಯ ಸದಸ್ಯರು ಲೌಕಿಕ ಶಕ್ತಿ, ಆಯುಧ ಬಲಗಳನ್ನು ಉಪಯೋಗಿಸಿದುದು ಮಾತ್ರ ಧರ್ಮಸಭೆಗೆ ಕೀರ್ತಿ ತರುವಂಥ ವಿಚಾರವಾಗಲಿಲ್ಲ.

ಮಧ್ಯಯುಗದ ಧರ್ಮಸಭೆಯ ತುಂಬುಜೀವನಕ್ಕೆ ತಡೆಯೊಡ್ಡಿದ ಪ್ರಭಾವವೆಂದರೆ ಹೊಸ ಹುಟ್ಟಿನ ಕಾಲದ ಬುದ್ಧಿಪಾರಮ್ಯವಾದ. 1517ರಲ್ಲಿ ಲೂತರ್, ಕ್ಯಾಲ್ವಿನ್, ಜ್ವಿಂಗ್ಲಿ-ಇವರು ಸನಾತನ ಧರ್ಮಸಭೆಯೊಡನೆ ಹಲವು ಭಿನ್ನಾಭಿಪ್ರಾಯಗಳನ್ನು ತಳೆದು, ಪೋಪ್ ಜಗದ್ಗುರುಗಳ ಅಧಿಕಾರವನ್ನು ಒಪ್ಪದೆ ಹೋದುದರಿಂದ ಪಾಶ್ಚಾತ್ಯ ಕ್ರೈಸ್ತ ಜಗತ್ತೇ ಘೋರವಾಗಿ ಇಬ್ಭಾಗವಾಗಿ ಒಡೆಯಿತು. ಆದರೆ ಕ್ಯಾತೊಲಿಕ್ ಧರ್ಮಸಭೆ ಹಠಾತ್ತನೆ ಬಂದ ಈ ವಿಘ್ನವನ್ನು ಶಕ್ತಿಯುತವಾಗಿ ಎದುರಿಸಿತು. ಧರ್ಮಸಭೆಯ ಸತ್ಸಂಪ್ರದಾಯಗಳ ರಕ್ಷಣೆ, ಪ್ರಚಾರಗಳನ್ನು ಆಗತಾನೆ ಸ್ಥಾಪನೆಗೊಂಡ ಹೊಸ ಧಾರ್ಮಿಕ ಸಭೆಗಳು ವಿಶ್ವದಾದ್ಯಂತ ಭರದಿಂದ ಕೈಗೊಂಡವು (ಸುಮಾರು ಇದೇ ಕಾಲದಲ್ಲಿ ಫ್ರಾನ್ಸಿಸ್ ಜೇವಿಯರ್ ಭಾರತಕ್ಕೆ ಬಂದಿದ್ದ) ; ಅನುಭಾವಿ ಸಂತರು ಮತ್ತೊಮ್ಮೆ ಧರ್ಮಸಭೆಯ ಪಾವಿತ್ರ್ಯದ ಕುರುಹಾಗಿ ಮೆರೆದರು. ಟ್ರೆಂಟ್ ಕೌನ್ಸಿಲ್‍ನಲ್ಲಿ (1545-63) ನಂಬಿಕೆ. ಧರ್ಮಾಚರಣೆಯ ಬಗೆಗಿರುವ ಕೆಲವು ಮುಖ್ಯ ವಿಷಯಗಳನ್ನು ಮತ್ತೊಮ್ಮೆ ನಿರೂಪಿಸಿದ ಮೇಲಂತೂ ಕ್ಯಾತೊಲಿಕ್ ಚರ್ಚಿನ ಆತ್ಮಪರಿಷ್ಕಾರ, ಧರ್ಮವಿಕಾಸ ಆಶ್ಚರ್ಯಕರವಾದ ವೇಗದಿಂದ ಸಾಗಿತು.

19ನೆಯ ಶತಮಾನ ಧರ್ಮಸಭೆಯಲ್ಲಿ ಮೂಡಿಬಂದ ಹೊಸ ಹುರುಪಿನ ಇನ್ನೊಂದು ಯುಗ, ದಕ್ಷ ಹಾಗೂ ವಿಶ್ವವ್ಯಾಪಿ ಧರ್ಮಪ್ರಸಾರ ಕಾರ್ಯಕ್ರಮಗಳು ಕ್ಯಾತೊಲಿಕ್, ಪ್ರಾಟೆಸ್ಟಂಟ್ ಇಬ್ಬರ ಕಡೆಯಿಂದಲೂ ಈ ಯುಗದಲ್ಲಿ ನಡೆದವು.

ವಿವಿಧ ಚರ್ಚುಗಳನ್ನು ಏಕೀಕರಿಸುವ ಪ್ರಯತ್ನ 20ನೆಯ ಶತಮಾನದಲ್ಲಿ ನಡೆದಿದೆ. ಪ್ರಾಟೆಸ್ಟಂಟರಿಂದ ಆರಂಭಗೊಂಡ ಈ ಆಂದೋಲನ ಪರಸ್ಪರ ತಿಳುವಳಿಕೆ, ಗೌರವಗಳ ಆಧಾರದ ಮೇಲೆ ವಿವಿಧ ಕ್ರೈಸ್ತ ಘಟಕಗಳು ಹತ್ತಿರ ಸರಿದು ಕ್ರಮೇಣ ಒಂದಾಗಬೇಕು. ಉದ್ದೇಶವನ್ನು ಇಟ್ಟುಕೊಂಡಿದೆ. ಕ್ಯಾತೊಲಿಕರೂ ಇದರಲ್ಲಿ ಭಾಗವಹಿಸುತ್ತಾರೆ.

ಎರಡನೆ ವ್ಯಾಟಿಕನ್ ಮಹಾಸಭೆಯಲ್ಲಿ ಕ್ಯಾತೊಲಿಕ್ ಧರ್ಮಸಭೆಯನ್ನು ನವೀಕರಿಸುವ ಸೂತ್ರಗಳನ್ನು ಘೋಷಿಸಲಾಯಿತು. ಚರ್ಚುಗಳ ಏಕೀಕರಣ ಧರ್ಮಸಭೆಯ ಆಂತರಿಕ ಜೀವನವನ್ನು ಕುರಿತಂತೆ ಹೊಸ ಮತ್ತು ಆಳವಾದ ಪರಿಜ್ಞಾನ, ಅನ್ಯಧರ್ಮಗಳ ಬಗೆಗೆ ರಚನಾತ್ಮಕ ನಿಲುವು. ಇಂದಿನ ತುರ್ತು ಸಮಸ್ಯೆಗಳಾದ ಶಾಂತಿ, ಆರ್ಥಿಕ ಸಾಮಾಜಿಕ ಅಭಿವೃದ್ಧಿ ಇತ್ಯಾದಿಗಳಲ್ಲಿ ಕ್ರೈಸ್ತರಲ್ಲಿನ ಬೇಕಾದ ಕರ್ತವ್ಯಪ್ರಜ್ಞೆ-ಇಂಥ ಹಲವಾರು ಮಹತ್ತ್ವವುಳ್ಳ ಅಂಶಗಳನ್ನು ಈ ಮಹಾಸಭೆ ಒತ್ತಿಹೇಳಿತು.

3. ಕ್ರೈಸ್ತಧರ್ಮದ ತಿರುಳು : ಧರ್ಮ ಸಭೆಯನ್ನು ಅರ್ಥ ಮಾಡಿಕೊಳ್ಳುವ ಪ್ರಯತ್ನ ಕ್ರೈಸ್ತಧರ್ಮದ ಮೂಲಭೂತ ಸಿದ್ಧಾಂತಗಳ ಹಿನ್ನಲೆಯಲ್ಲಿ ಆರಂಭವಾಗಬೇಕು. ತ್ರೈಕ ದೇವರು ; ಸುತನಾದ ದೇವರು, ಮಾನವ ರೂಪವನ್ನು ಧರಿಸಿ ತನ್ನ ಮರಣ ಮತ್ತು ಪುನರುತ್ಥಾನಗಳಿಂದ ಧರ್ಮಸಭೆಯನ್ನು ಸ್ಥಾಪಿಸಿದುದು ; ಮುಕ್ತಿಯನ್ನು ಪಡೆಯುವುದಕ್ಕಾಗಿ, ದೇವರ ಹಾಗೂ ಮಾನವ ನಡುವೆ ಇರುವ ಏಕೈಕ ಮಧ್ಯಸ್ಥ-ಯೇಸುಕ್ರಿಸ್ತ ; ಇವನು ಸಾರ್ವಕಾಲಿಕವಾಗಿ ತನ್ನ ಧರ್ಮಸಭೆಯಲ್ಲಿ ಶಿರೋಪ್ರಾಯವಾಗಿದ್ದು , ತನ್ನ ಜೀವನವನ್ನು ಸತತವಾಗಿ ಅದಕ್ಕೆ ಸಂವಹಿಸುತ್ತಾ, ತನ್ನ ಮಧ್ಯಸ್ಥಿಕೆಯ ಸಾಧನವನ್ನಾಗಿ ಅದನ್ನು ಉಪಯೋಗಿಸುತ್ತಾನೆ ; ಧರ್ಮಸಭೆ ತನ್ನ ಬೋಧನೆ, ಸಂಸ್ಕಾರಗಳ ಮೂಲಕ ದೇವರ ಜನತೆಯನ್ನು ಮುಕ್ತಿಯತ್ತ ಕರೆದೊಯ್ಯುತ್ತದೆ. ಇವು ಮೂಲಭೂತ ನಂಬಿಕೆಗಳು.

ಧರ್ಮಸಭೆಯೆಂದರೆ ಕ್ರಿಸ್ತನ ಮೂಲಕವಾಗಿ ದೇವರ ದಿವ್ಯ ಜೀವದಲ್ಲಿ ಪಾಲ್ಗೊಳ್ಳುವವರ ಒಂದು ಸಂಘಟಿತ ಸಮೂಹ. ಈ ಅರ್ಥದಲ್ಲಿ ಧರ್ಮಸಭೆಯನ್ನು ದೇವರ ವಾಸಸ್ಥಾನವೆಂದೂ ಮತ್ತು ಕ್ರಿಸ್ತನ ಮಾನವಿಕ ಸದ್ಗಣಗಳಲ್ಲದೆ, ದಿವ್ಯ ಪ್ರಭಾವ ವ್ಯಕ್ತಿತ್ವವನ್ನು ಮೇಲಿನ ಅರ್ಥದಲ್ಲಿ ಹೊಂದಿದುದರಿಂದ, ಕ್ರಿಸ್ತನ ವಧು ಎಂದು ಕರೆಯುತ್ತಾರೆ. (ದೇವರೂ ಮನುಷ್ಯರೂ ಒಬ್ಬನೇ ವ್ಯಕ್ತಿಯಾಗುತ್ತಾನೆ. ಇಬ್ಬರೂ ಸಂಪೂರ್ಣವಾಗಿ ಐಕ್ಯವಾಗುತ್ತಾರೆ ಎಂಬ ಭಾವನೆಗೆ ಕ್ರೈಸ್ತಧರ್ಮದಲ್ಲಿ ಎಡೆ ಇಲ್ಲ).

ದೇವರ ಜೀವದಲ್ಲಿ ಪಾಲ್ಗೊಳ್ಳುವುದನ್ನು ಕ್ರೈಸ್ತ ಧರ್ಮದಲ್ಲಿ ಕೃಪೆ (ಗ್ರೇಸ್) ಎನ್ನುತ್ತಾರೆ. ದೇವರು ಮನುಷ್ಯನಿಗೆ ಸ್ವೇಚ್ಛೆಯಾಗಿ ಕೊಟ್ಟ ವರವಿದು. ಕೃಪೆಯಿಂದಾಗಿ ಧರ್ಮಸಭೆಯ ಸದಸ್ಯರು ನಿಜವಾದ ಅರ್ಥದಲ್ಲಿ ದೇವರ ಪುತ್ರರಾಗುತ್ತಾರೆ, ಮತ್ತು ಪಾಪಗಳ ಕ್ಷಮೆಯನ್ನು ಪಡೆಯುತ್ತಾರೆ. ಕೃಪೆಯಿಂದಾಗಿ ನಂಬಿಕೆ ಭರವಸೆ ಮತ್ತು ಪ್ರೀತಿ ಎಂಬ ಸದ್ಗಣಗಳು ಉದ್ಭವಿಸುತ್ತವೆ. ನಂಬಿಕೆ ಎಂದರೆ ದೇವರು ತನ್ನ ಬಗೆಗೆ ಹೇಳಿರುವ ಸತ್ಯಗಳಿಗೆ ಮನುಷ್ಯನಿಗೆ ತೋರಿಸಿದ ಪ್ರೀತಿಗೆ ಮನುಷ್ಯ ಕೊಡುವ ಜವಾಬು. ದೇವರ ಮಾತನ್ನು ನಂಬಿ. ಅದಕ್ಕೆ ಸೂಕ್ತವಾದ ಪ್ರತಿ ಪ್ರೀತಿಯನ್ನು ನಡೆನುಡಿಗಳಲ್ಲಿ ತೋರಿಸುವ ಆಶ್ವಾಸನೆ ಇದರಲ್ಲಿ ಅಡಕವಾಗಿದೆ. ಭರವಸೆ ಎಂದರೆ ನಂಬಿಕೆಯಿಂದಾಗಿ ನಾವು ತಿಳಿದುಕೊಂಡಿರುವ ದೇವರನ್ನು ದೃಢಚಿತ್ತದಿಂದ ಎದುರು ನೋಡುವುದು. ದೇವರನ್ನು ತನುಮನ ಧನಗಳಿಂದ ಪ್ರೀತಿಸುವುದು. ಪರರನ್ನು ತನ್ನಂತೆ ಪ್ರೀತಿಸುವುದೇ ಪ್ರೀತಿ. ಕ್ರೈಸ್ತಧರ್ಮದಲ್ಲಿ ಪ್ರೀತಿಯೇ ಪರಮಗುಣ. ನಂಬಿಕೆ, ಭರವಸೆಗಳನ್ನು ಆಧರಿಸಿಕೊಂಡು ಸ್ವರ್ಗದಲ್ಲಿ ದೇವರನ್ನು ಸ್ವತಃ ಅನುಭವಿಸುವುದರಲ್ಲಿ ಪ್ರೀತಿ ಪರಿಪೂರ್ಣಗೊಳ್ಳುತ್ತದೆ. ಈ ಲೋಕದಲ್ಲಿ ಧರ್ಮಸಭೆ ಅನೇಕ ಲೋಕಹಿತ ಕಾರ್ಯಗಳಲ್ಲಿ ತೊಡಗುವುದಕ್ಕೆ ಕಾರಣ ಇದೇ ಪ್ರೀತಿ. ಅಲ್ಲದೆ ತನ್ನ ಧಾರ್ಮಿಕ ನಂಬಿಕೆಗಳನ್ನು ಪ್ರಚಾರ ಮಾಡುವುದಕ್ಕೆ-ಯೇಸು ಕೊಟ್ಟ ಸ್ಪಷ್ಟ ಅಣತಿಯಲ್ಲದೆ-ಎಲ್ಲ ಜನರ ಹಿತಾಸಕ್ತಿಯ ಬಗೆಗೆ ಇರುವ ಪ್ರೀತಿಯೂ ಒಂದು ಬಲವಾದ ಕಾರಣ.

ಕ್ರಿಸ್ತ ತಾನೂ ಎಲ್ಲ ಕಾಲದಲ್ಲೂ ಧರ್ಮಸಭೆಯೊಡನೆ ಇರುತ್ತೇನೆ ಎಂದು ಮಾತು ಕೊಟ್ಟಿದ್ದಾನೆ. ಕ್ರಿಸ್ತನ ಜೀವವನ್ನು ಪಾಲ್ಗೊಳ್ಳುವ ಮೂಲಕ ಧರ್ಮ ಸಭೆ ಇಹಲೋಕದಲ್ಲಿ ಈಗ ಜೀವಂತವಾಗಿರುವ ಕ್ರಿಸ್ತನ ಶರೀರ. ಕ್ರಿಸ್ತ ಈ ಶರೀರದ ಶಿರ. ಹೀಗೆ ಧರ್ಮಸಭೆಯ ಸದಸ್ಯರು ಪರಸ್ಪರ ಒಂದೇ ಶರೀರದ ಅಂಗಾಂಗಗಳಂತೆ ಸಾವಯವ ಸಂಬಂಧವನ್ನು ಹೊಂದಿದವರು ; ಕ್ರಿಸ್ತನೊಡನೆ ಜೀವಂತ ಸಂಬಂಧ ಇಟ್ಟುಕೊಂಡವರು. ಪಾಪಕೃತ್ಯಗಳ ಮೂಲಕ ಕ್ರಿಸ್ತನನ್ನು ಅಲ್ಲಗಳೆದರೆ ಈ ಸಂಬಂಧ ಕಡಿದುಹೋಗಿ, ಆ ಸದಸ್ಯನ ಆತ್ಮ ಮೃತಾವಸ್ಥೆಯಲ್ಲಿರುತ್ತದೆ.

ಧರ್ಮಸಭೆ ಸಂಸ್ಕಾರಗಳ (ಇವುಗಳಿಂದ ಕೃಪೆ ಲಭಿಸುವುದು ಮತ್ತು ಆಯಾ ಸಂದರ್ಭಕ್ಕೆ ಬೇಕಾದ ವಿಶೇಷ ನೆರವೂ ಲಭಿಸುತ್ತದೆ.) ಮತ್ತು ದೇವರ ಮಾತನ್ನು ಬೋಧಿಸುವುದರ (ಬೈಬಲಿನ ಮಾತುಗಳ ಮೂಲಕ ದೇವರು ಶ್ರೋತೃಗಳಿಗೆ ಹಾಜರು ಆಗುತ್ತಾನೆ) ಮೂಲಕ ತನ್ನಲ್ಲಿರುವ ದೇವರ ಜೀವ ವರ್ಧಿಸುವಂತೆ ಮಾಡುತ್ತದೆ. ಹೀಗೆ ಕೃಪೆ ವರ್ಧಿಸಿ ಕೊನೆಯ ಹಂತದಲ್ಲಿ ಸ್ವರ್ಗದಲ್ಲಿ ದೇವರ ದರ್ಶನವನ್ನು ಪಡೆಯುವುದೇ ಧರ್ಮಸಭೆಯ ಗುರಿ. ಈ ದರ್ಶನದಲ್ಲಿ ದೇವರನ್ನು ಪ್ರತ್ಯಕ್ಷ ಕಂಡು, ಮಾನವ ಎಲ್ಲ ವಿಧದ ಪರಮ ತೃಪ್ತಿಕರವಾದ ಪರಮಾನಂದವನ್ನು ಪಡೆಯುತ್ತಾನೆ. ಈ ಹಂತದಲ್ಲಿಯೇ ಧರ್ಮಸಭೆ ತನ್ನ ಕಾರ್ಯವೆಲ್ಲವನ್ನೂ ಪೂರೈಸಿ ತನ್ನ ಪರಿಪೂರ್ಣತೆಯನ್ನು ಪಡೆಯುವುದು. (ಈಗಾಗಲೆ ಸ್ವರ್ಗಸ್ಥರಾದ ಸದಸ್ಯರಲ್ಲಿ ಧರ್ಮಸಭೆ ಈ ಪರಿಪೂರ್ಣತೆಯ ಮಟ್ಟವನ್ನು ತಲುಪಿದೆ).

ದೇವರ ಜೀವದಲ್ಲಿ ಮನುಷ್ಯರು ಪಾಲ್ಗೊಳ್ಳುವುದರ ಸ್ವಾಭಾವಿಕ ಫಲ ದೇವರೊಡನೆ 'ಐಕ್ಯ ವಾಗುವುದು. ಆದರೂ ಕೃಪೆಯನ್ನು ಸ್ವೀಕರಿಸುವವನ ಪಾಲಿನ ಸಹಕಾರವೂ ಅತ್ಯಗತ್ಯ. ಕೃಪೆಯ ಪರಮ ಪರಿಪೂರ್ಣತೆ ಸ್ವರ್ಗಲೋಕದಲ್ಲಿ ಮಾತ್ರ ಕಾಣಸಿಗುವುದು. ಈ ಲೋಕದಲ್ಲಿ ಯಾತ್ರಿಕವಸ್ಥೆಯಲ್ಲಿರುವ ಧರ್ಮಸಭೆಯ ಈ ಪರಿಪೂರ್ಣತೆಯನ್ನು ಪಡೆಯಲು ಸತತ ಪ್ರಯತ್ನ ನಡೆಸುತ್ತದೆ. ಇಹದಲ್ಲಿ, ಧರ್ಮಸಭೆಯ ಸದಸ್ಯರಲ್ಲಿ ಅಧಿಕಾರಿಗಳಲ್ಲಿ ಊನಗಳು ಕಂಡುಬಂದರೆ, ಮಾನವ ಸಹಜ ದೌರ್ಬಲ್ಯವೇ ಇದಕ್ಕೆ ಕಾರಣ. ಧರ್ಮಸಭೆಯ ಸ್ಥಾಪನೆ, ನಡೆವಳಿಕೆ, ಗುರಿಗಳು ಅವಶ್ಯವಾಗಿ ಪಾರಮಾರ್ಥಿಕ ಸ್ವಭಾವದವು ಎಂದೇ ಧರ್ಮಸಭೆ ಅವಶ್ಯವಾಗಿ ಪವಿತ್ರವಾದುದು.

ಧರ್ಮಸಭೆಯ ಆಡಳಿತ ಕ್ರಮ ಅದು ತನ್ನ ಆಂತರಿಕ ಗುರಿಗಳನ್ನು ಪಡೆಯುವುದಕ್ಕಾಗಿ ಇರುವ ಒಂದು ಸ್ಥಾನವಷ್ಟೆ. ಸೇವಾಮನೋಭಾವದಿಂದ ಆಡಳಿತ ಕಾರ್ಯಗಳಲ್ಲಿ ನಿರತರಾದವರು ತಮ್ಮ ವಶಕ್ಕೆ ಒಪ್ಪಿಸಿದ ಭಕ್ತಸಮೂಹ ಕೃಪಾಜೀವನದಲ್ಲಿ ಮುಂದುವರಿದು, ಪರಿಪೂರ್ಣವಾದ ಪ್ರೀತಿಯಲ್ಲಿ ದೇವರ ದರ್ಶನವನ್ನು ಪಡೆಯುವಂತೆ ನಿರ್ದೇಶನ ನೀಡುತ್ತಾರೆ. ಕಾರ್ಯಪಾವಿತ್ತ್ಯದ ದೆಸೆಯಿಂದ ಪುರೋಹಿತ ವರ್ಗದವರು ಮಾತ್ರ ಮಿಕ್ಕೆಲ್ಲರಿಗಿಂತ ಹೆಚ್ಚಿನ ಗೌರವಕ್ಕೆ ಪಾತ್ರರು, ಅಷ್ಟೆ.

ಧರ್ಮಸಭೆಯ ಸದಸ್ಯತ್ವವನ್ನು ಲೌಕಿಕವಾಗಿ ವಿವರಿಸುವುದು ಕಷ್ಟ. ಸಮಸ್ತ ಮಾನವ ಕುಲ ಮುಕ್ತಿಯನ್ನು ಪಡೆಯಬೇಕೆಂದು ದೇವರು ಇಷ್ಟಪಡುತ್ತಾನೆ. ಆದುದರಿಂದ ಎಲ್ಲರು ಧರ್ಮಸಭೆಯ ಸದಸ್ಯರಾಗಲು ಆಮಂತ್ರಿತರಾಗಿದ್ದಾರೆ. ಪ್ರಾಮಾಣಿಕವಾಗಿ ದೇವರನ್ನು ಮತ್ತು ಮುಕ್ತಿಯನ್ನು ಶೋಧಿಸುವ ಪ್ರತಿಯೊಬ್ಬ ವ್ಯಕ್ತಿಯೂ ಧರ್ಮಸಭೆಯ ಸದಸ್ಯ ; ಸಂಬಂಧದ ಮಟ್ಟ ಹಾಗೂ ಆಳದಲ್ಲಿ ಮಾತ್ರ ವ್ಯತ್ಯಾಸವಿರುತ್ತದೆ.
(ಇ.ಎನ್.ಎಸ್.ಜಿ.)

ಚರ್ಚ್ ವಾಸ್ತು : ಕ್ರೈಸ್ತಧರ್ಮಕ್ಕೆ ಸಂಬಂಧಿಸಿದಂತೆ ಚರ್ಚ್ ಎಂದರೆ ಕ್ರೈಸ್ತ ಮತೀಯರು ಸಾರ್ವಜನಿಕವಾಗಿ ಆರಾಧನೆಯನ್ನು ಸಲ್ಲಿಸುವ ಸ್ಥಳ. ಮೊದಲಲ್ಲಿ ಕ್ರಿಶ್ಚಿಯನರು ಅರಮನೆಯ ಕಟ್ಟಡಗಳಲ್ಲಿ, ಎರಡು ಕಂಬಸಾಲುಗಳುಳ್ಳ ಸಭಾಂಗಣವನ್ನು (ಬಸಲಿಕ) ಇಂಥ ಸ್ಥಳವಾಗಿ ಉಪಯೋಗಿಸುತ್ತಿದ್ದರು. ಅವರ ಗುರುವಾದ ಬಿಷಪ್ಪನ ಪೀಠವಿದ್ದ ಕಾರನ ಕಥೀಡ್ರಲ್ ಕೂಡ ಒಂದು ರೀತಿ ಚರ್ಚ್ ಅನಿಸಿಕೊಂಡಿತ್ತು. ಚರ್ಚ್ ಕಟ್ಟಡದ ಆರಂಭ, ಹೇಗಾಯಿತೆಂದು ಖಚಿತವಾಗಿ ಹೇಳುವುದು ಕಷ್ಟ. ಮೂಲತಃ ಸಾಂಪ್ರದಾಯಿಕವಾದ ಛಾವಣಿಯಿರುವ ಮುಖಮಂಟಪ, ಹಾಗೂ ಪಕ್ಕದ ಅಡ್ಡಸ್ನಾಯು ವಿನ್ಯಾಸದಲ್ಲಿರುವ ಇಕ್ಕೆಲದ ಹಜಾರಗಳನ್ನುಳ್ಳ ರೋಮನರ ಗೃಹಗಳಲ್ಲಿನ ರೂಪವಿನ್ಯಾಸಗಳೇ ಅನಂತರದ ಚರ್ಚ್ ಕಟ್ಟಡಗಳ ಮೂಲವಾದುವೆನ್ನಬಹುದು. ಆರಂಭದಲ್ಲಿ ಕ್ರೈಸ್ತ ಧರ್ಮವನ್ನವಲಂಬಿಸಿದ ಜನಗುಟ್ಟಾಗಿ ಇಂಥ ಮನೆಗಳಲ್ಲಿ ಸೇರುತ್ತ್ತಿದ್ದರು.

ಕ್ರೈಸ್ತ ಧರ್ಮ ಬಹಿರಂಗವಾಗಿ ಪ್ರಬಲವಾದಾಗ ಸಿರಿಯಾದಲ್ಲಿ ಮೊದಲು ಎರಡು ಕಂಬ ಸಾಲುಗಳುಳ್ಳ ಸಭಾಂಗಣದಂಥ (ಬಸಿಲಿಕ) ಕಟ್ಟಡ ಅಸ್ತಿತ್ವಕ್ಕೆ ಬಂದು ಕ್ರಮೇಣ ಇದು ಇಟಲಿ ದೇಶಕ್ಕೂ ಕಾಲಿಟ್ಟಿತು. ಆರಂಭದ ಹಾಗೂ ಮಧ್ಯಯುಗೀನ ಚರ್ಚ್ ಕಟ್ಟಡಗಳಲ್ಲಿ ಒಳಬಾಗಿಲಿನಿಂದ ಪುರೋಹಿತರು ಅಥವಾ ಗಾಯಕರು ಕೂಡುವ ಸ್ಥಳದವರೆಗೆ ಒಂದು ಮಧ್ಯಾಂಗಣ, ಎರಡು ಅಥವಾ ನಾಲ್ಕು ಇಕ್ಕೆಲದ ಹಜಾರಗಳು, ಅರ್ಧವೃತ್ತಾಕಾರದ ಉಚ್ಚಸ್ಥಾನಗಳಲ್ಲದೆ ಕೆಲವೊಮ್ಮೆ ಶಿಲುಬೆಯಾಕಾರದ ಅಷ್ಟಭಾಗ, ದೇವಾಲಯದ ಮುಖಮಂಟಪದ ತೊಟ್ಟಿಯ ಬಳಿ ಅಂತ್ಯಗೊಳ್ಳುವ ಅರ್ಧವೃತ್ತಾಕಾರದ ಉಚ್ಚಸ್ಥಾನಗಳು ಇರುತ್ತಿದ್ದುವು. ಮೇಲೆ ಮರದ ಮಾಳಿಗೆಗಳು. ಆದರೆ ಉಚ್ಚಸ್ಥಾನಗಳ ಮೇಲೆ ಮಾತ್ರ ಗುಮ್ಮಟಾಕಾರದ ಛಾವಣಿ ಇರುತ್ತಿತ್ತು. ಕ್ರಿ.ಶ. 6ನೆಯ ಶತಮಾನದಲ್ಲಿ ಕಟ್ಟಲಾದ ರೋಮ್ ದೇಶದ ಕೆಸ್ಮೆಡಿನ್‍ನಲ್ಲಿನ ಸಂತ ಮೇರಿ ಮತ್ತು ಕ್ಲಾಸೆಯಲ್ಲಿನ ಸಂತ ಅಪೋಲ್ಲನರ್ ಚರ್ಚ್‍ಗಳು ಅನೇಕ ಬಾರಿ ಜೀರ್ಣೋದ್ಧಾರಕ್ಕೊಳಗಾಗಿದ್ದರೂ ಇಂಥ ಮೂಲರೂಪವನ್ನು ಮಾತ್ರ ಉಳಿಸಿಕೊಂಡಿವೆ. 

ಪ್ರಾಚೀನ ಸಂಪ್ರದಾಯಕ್ಕೂ ಗಾತಿಕ್ ಸಂಪ್ರದಾಯಕ್ಕೂ ನಡುವಣ ರೋಮನ್ ಪ್ರಭಾವಕ್ಕೊಳಗಾಗಿದ್ದ ಶೈಲಿ (ರೋಮನೆಸ್ಕ್) ಮುಂದಿನ ಘಟ್ಟ. ಆದರೆ ಈ ಶೈಲಿಯ ಮೂಲರೂಪವನ್ನೊಳಗೊಂಡ, ಮತ್ತಾವ ಬದಲಾವಣೆಗಳಾಗಲೀ ಸೇರ್ಪಡೆಗಳಾಗಲೀ ಇಲ್ಲದ ಚರ್ಚ್‍ಕಟ್ಟಡಗಳು ಇಲ್ಲವೆಂದೇ ಹೇಳಬೇಕು. ಅಲ್ಲದೆ ಯೂರೋಪ್ ಖಂಡದಲ್ಲಿ ಈ ಶೈಲಿಯ ಕಟ್ಟಡಗಳ ಎಲ್ಲ ಭಾಗಗಳೂ ಒಂದೇ ತೆರನಾಗಿ, ಸಮರೂಪದಲ್ಲಿರಲಿಲ್ಲ. ಕ್ರಿ.ಶ. 500 ರಿಂದ 1000ದ ವರೆಗಿನ ಐದು ಶತಮಾನಗಳಲ್ಲಿ ಅನಾಗರಿಕ, ರೋಮನ್ ಹಾಗೂ ಕ್ರಿಶ್ಚನ್ ಸಂಸ್ಕ್ರತಿಗಳ ಪರಸ್ಪರ ಒಂದುಗೂಡುವಿಕೆಯಲ್ಲಿ ಬದಲಾವಣೆಯಾಗದೆ ಉಳಿದುದು ಚರ್ಚ್ ಒಂದೇ. ಇಟಲಿ ದೇಶದ ಮಿಲಾನ್ ನಗರದ ಸಂತ ಅಮ್ರಿಗೊ ಕಟ್ಟಡ ವಿನ್ಯಾಸದಲ್ಲಿ ಮೊದಲಿನ ಛಾವಣಿಯಿರುವ ಮುಖಮಂಟಪವನ್ನು ಉಳಿಸಿಕೊಳ್ಳಲಾಗಿದೆ. ಆದರೆ ಎರಡು ಕಂಬಸಾಲುಗಳ ಸಭಾಂಗಣದ ಇಕ್ಕೆಲಗಳಲ್ಲಿ ಮೊದಲಿದ್ದಂತೆ ಅಡ್ಡಸ್ನಾಯು ಹಜಾರಗಳು ಮಾತ್ರ ಇಲ್ಲ. ಆದರೆ ಗುಮ್ಮಟಾಕಾರದ ಛಾವಣಿಗಳಿಗೆ ಆಧಾರವಾಗಿ ಚೋಡಿಸಿರುವ ಕೂಡಂಚುಗಳನ್ನು (ಉಬ್ಬು) ನಾವು ಮೊದಲು ಈ ಕಟ್ಟಡದಲ್ಲಿ ಕಾಣುತ್ತೇವೆ. ಮಧ್ಯಯುಗದಲ್ಲಿ ಆರಂಭವಾದ ಸಭಾಂಗಣದ ಮೇಲಿನ ಮಾಳಿಗೆಗೆ ಉಬ್ಬುಗಳನ್ನು ಕೂಡಿಸುವ ಪದ್ಧತಿ ರೋಮ್, ಗ್ರೀಸ್ ಹಾಗೂ ಸಿರಿಯ ಮುಂತಾದ ಸಮೀಪ ಪ್ರಾಚ್ಯ ದೇಶಗಳಲ್ಲಿ ಹೆಚ್ಚು ಪ್ರಚಲಿತವಾಗದಿದ್ದರೂ ಇಂಥ ಶೈಲಿ ಮುಂದಿನ ಎರಡು ಶತಮಾನಗಳಲ್ಲಿ ಯೂರೋಪಿನಲ್ಲಿ ಔನ್ನತ್ಯವನ್ನು ಪಡೆಯಿತು. ಬಿಷಪ್ಪಿನ ಪೀಠವಿರುವ ಗಾತಿಕ್ ಆರಾಧನ ಮಂದಿರದ ಮಧ್ಯಾಂಗಣ ಎತ್ತರವಾಗಿದ್ದು ಗಾಂಭೀರ್ಯಯುಕ್ತವಾಗಿ ಕಾಣುತ್ತದೆ.

ಇದರಲ್ಲಿಯೂ ಈ ಶತಮಾನಗಳಲ್ಲಿ ನಾಲ್ಕು ಘಟ್ಟಗಳನ್ನು ಗುರುತಿಸಬಹುದು. ಮರದ ಛಾವಣಿಯ ಉಪಯೋಗ ಆರಂಭದ ಬಸಿಲಿಕಗಳಲ್ಲಿ ಕಂಡುಬಂತು. ಪೀಪಾಯಿಗಳನ್ನು ಅಥವಾ ಕೂಡುಕಮಾನುಗಳನ್ನು ಇಟ್ಟಂಥ ಛಾವಣಿ ಅನಂತರದ್ದು. ಬಿಜಾಂಟಿನ್ ಶಿಲ್ಪಿಗಳು ಲೋಲಕಗಳ ಮೇಲೆ ಗುಮ್ಮಟಗಳನ್ನೆಬ್ಬಿಸುವ ಪದ್ಧತಿಯನ್ನಾರಂಭಿಸಿದರು. ಎಂಟು ಮೂಲೆಯ ಗೋಪುರಗಳ ಅಡ್ಡಕಮಾನುಗಳ ಮೇಲೆ ಗುಮ್ಮಟಗಳನ್ನು ಕಟ್ಟುವುದು ನಾಲ್ಕನೆಯ ಘಟ್ಟ.

ಉತ್ತರ ಇಟಲಿಯಲ್ಲಿ ಇದೇ ಕಾಲದಲ್ಲಿ ಹಲವು ನವೀನ ವಾಸ್ತುರೀತಿಗಳನ್ನು ಬಳಕೆಗೆ ತರಲಾಯಿತು. ತೆರೆದ ಕಮಾನುದಾರಿಗಳು, ಕಲಾತ್ಮಕ ದ್ವಾರಮಂಟಪಗಳು, ಚಿತ್ರಕೊರೆತ ಹಾಗೂ ಕುಂದಣ ಶೈಲಿಗಳನ್ನು ಉಪಯೋಗಿಸಲಾಯಿತು. ಮೋಡನ ಆರಾಧನಮಂದಿರದಲ್ಲಿ ಇದನ್ನು ನಾವು ನೋಡಬಹುದು. ರೋಮನ್ ಚರ್ಚುಗಳಲ್ಲಿ ಕಮಾನುದಾರಿಗಳು ವಿಶಿಷ್ಟವಾದುವು. ಸರಳವಾದ ನಯವಿಲ್ಲದ ಬಸಿಲಿಕಗಳ ರಚನೆಯಲಿ ಕಂಡುಬಂದ ಕಾಠಿನ್ಯವನ್ನು ತಗ್ಗಿಸಲು ಇಟಲಿಯ ಶಿಲ್ಪಿಗಳು ಈ ಪದ್ಧತಿಯನ್ನು ಅನುಸರಿಸಿದರು. ಫ್ಲಾರೆನ್ಸಿನ ಜ್ಞಾನಸ್ನಾನಶಾಲೆಯಲ್ಲಿ ತೆರೆದ ಕಮಾನುಧಾರಿಗಳೂ ಕಲಾತ್ಮಕ ದ್ವಾರಗಳೂ ಈಗ ಇಲ್ಲ. ಅವುಗಳ ಸ್ಥಳದಲ್ಲಿ ಕೋನಾಕಾರದ, ರೇಖಾವಿನ್ಯಾಸಗಳ ಕೆತ್ತನೆಯ ಮುಂಭಾಗಗಳನ್ನು ಜೋಡಿಸಲಾಗಿದೆ. ಲೂಕ್ಕಾದ ಆರಾಧನಾ ಮಂದಿರವಾದ ಸ್ಯಾನ್ ಮಿಷೆಲ್‍ನಲ್ಲಿ ರೋಮನೆಸ್ಕ್ ಶೈಲಿಯ ಆಲಂಕಾರಿಕ ಅಂಗಗಳನ್ನು ಕಾಣಬಹುದು. ತೆರೆದ ಕಮಾನುದಾರಿಗಳನ್ನು ಉಪಯೋಗಿಸುವುದರ ಜೊತೆಗೆ ವ್ಯತ್ಯಸ್ತಕಂಬಗಳನ್ನು ಅಳವಡಿಸಲಾಗಿದ್ದು ಕಮಾನಿನ ಮೂಲೆಕಟ್ಟುಗಳಲ್ಲಿ ಮಧ್ಯಾಂಗಣದ ಸುತ್ತಲಿನ ಛಾವಣಿಯ ಹಾದಿಗಳಲ್ಲೂ ರೇಖೆಗಳನ್ನು, ಪ್ರಾಣಿಗಳನ್ನು, ಊಹಾತ್ಮಕ ಚಿತ್ರಗಳನ್ನು ತುಂಬಲಾಗಿದೆ. 

ಫ್ರಾನ್ಸಿನ ಉತ್ತರ ಭಾಗವನ್ನು ಆಕ್ರಮಿಸಿದ ನಾರ್ಮನ್ ಜನ ಚರ್ಚ್ ಕಟ್ಟಡಗಳಲ್ಲಿ ಯಾವ ಸ್ವಂತಿಕೆಯನ್ನೂ ಅಳವಡಿಸಲಿಲ್ಲ. ದೀರ್ಘ ಚತುರಸ್ರದ ಗೋಪುರಗಳನ್ನುಳ್ಳ ಸ್ಥೂಲವಾದ ಕಟ್ಟಡಗಳನ್ನು ಮಾತ್ರ ಅವರು ಕಟ್ಟಿದರು. ಡರ್ಹಾಂದಲ್ಲಿನ ಆರಾಧನ ಮಂದಿರ ಇದಕ್ಕೊಂದು ನಿದರ್ಶನ. ಆದರೆ ಜರ್ಮನಿಯಲ್ಲಿ ದ್ವಿಗುಣಿತ ಬೃಹದ್ವ್ಯಾಸದ ಮಂದಿರಗಳನ್ನು ಕಟ್ಟಲಾಯಿತು. ಬ್ಯಾಂಬರ್ಗ್‍ನಲ್ಲಿ ಇಂಥದೊಂದಿದೆ (1185-1274).

ಗಾತಿಕ್ ಶೈಲಿ ಮೊದಲು ಒರಟಾಗಿದ್ದು ಆರ್ಷೇಯವಾದ ಮೂರ್ತಿಶಿಲ್ಪಗಳನ್ನು ಹೊಂದಿದ್ದು ಕ್ರಮೇಣ ಹಗುರಾಗಿ ಆಡಂಬರಯುತವಾಗಿ ಅಲಂಕರಿಸಲ್ಪಟ್ಟು ನೈಸರ್ಗಿಕತೆಯನ್ನು ಪಡೆಯಿತು. ಈ ಶೈಲಿ ಅತ್ಯುನ್ನತ ಮಟ್ಟಕ್ಕೇರಿದುದು ಆರಾಧನ ಮಂದಿರಗಳ ರಚನೆಯಲ್ಲಿ. 1150-1550ರ ನಡುವೆ ಅನೇಕ ನಗರಗಳಲ್ಲಿ ಡೊಡ್ಡದಾದ ಭವ್ಯವಾದ ಇಂಥ ಕಟ್ಟಡಗಳು ತಲೆ ಎತ್ತಿದವು. ಕಲೆಯ ಪುನರುಜ್ಜೀವನದ ಲೌಕಿಕತೆಯನ್ನು ಈ ಶೈಲಿಯಲ್ಲಿ ಕಾಣಬಹುದಾಗಿದೆ. ಗಾತಿಕ್ ಶೈಲಿ ಹೆಚ್ಚಾಗಿ ಫ್ರೆಂಚರ ಕೊಡುಗೆ. 

ಚರ್ಚ್ ಕಟ್ಟಡಗಳ ನಿರ್ಮಾಣ ಮತ್ತು ಪುನರ್ನಿರ್ಮಾಣಕಾರ್ಯ ಹದಿನೇಳನೆಯ ಶತಮಾನದಲ್ಲಿ ಬಹಳಮಟ್ಟಿಗೆ ಆಯಿತು. ಆದರೆ ಮಧ್ಯದ ಗುಮ್ಮಟವನ್ನುಳಿಸಿಕೊಂಡರೂ ಈ ಕಟ್ಟಡಗಳಲ್ಲಿ ಬೀದಿಯ ಕಡೆಗಿರುವ ಮುಂಭಾಗ ಮತ್ತು ಗೋಡೆಕಂಬಗಳ ಮುಖಮಂಟಪಗಳ ಮೇಲೆ ತ್ರಿಕೋನಾಕೃತಿಯ ರಚನೆ, ಅಲಂಕಾರ ಇತ್ಯಾದಿಗಳನ್ನು ಈ ಕಟ್ಟಡಗಲ್ಲಿ ಹೆಚ್ಚುಹೆಚ್ಚಾಗಿ ಆಗ ಅಳವಡಿಸಲಾಯಿತು. ಜೊತೆಗೆ ಈ ಕಟ್ಟಡಗಳು ನಿಡಿದಾದ ಮಧ್ಯಾಂಗಣ, ಮುಂಭಾಗದ ಜೋಡಣೆ, ಬೋದಿಗೆಗಳಿಂದ ಕೂಡಿದ ಕಂಬಸಾಲುಗಳ ಸೇರ್ಪಡೆಗಳಿಂದ ಆಕಾರ ಹಾಗೂ ವಿಸ್ತೀರ್ಣಗಳಲ್ಲಿ ಅಸಮರೂಪವನ್ನು ತಾಳಿದುವು. ಕ್ರಮೇಣ ಈ ಅಸಮರೂಪ ರಚನೆ ಒಂದು ಶೈಲಿಯಾಗಿ ಉಳಿಯಿತು.
(ಎಂ.ಡಿ.ಎಸ್.; ಜಿ.ಬಿ.ಆರ್.)

	ಕರ್ನಾಟಕದಲ್ಲಿ : ರೋಮನ್ ಕ್ಯಾತೋಲಿಕ್ ವೆಸ್ಲಿಯನ್ ಮತ್ತು ಲಂಡನ್ ಮಿಷನ್ ಚರ್ಚುಗಳೇ ತುಂಬ ಪ್ರಸಿದ್ಧವಾದ ಸಂಸ್ಥೆಗಳೆನಿಸಿಕೊಂಡಿವೆ. ರೋಮನ್ ಕ್ಯಾತೊಲಿಕ್ ಪಂಥಕ್ಕೆ ಸೇರಿದ ಬೆಂಗಳೂರಿನ ಸೇಂಟ್ ಮೇರಿ ಚರ್ಚ್ (ಕ್ರಿ.ಶ.1882) ಮತ್ತು ಸೇಂಟ್ ಜೋಸೆಫ್ ಚರ್ಚ್ (ಕ್ರಿ.ಶ. 1882), ಆನೇಕಲ್ಲಿನಲ್ಲಿರುವ ದಿ ಸೇಕ್ರೆಡ್ (ಕ್ರಿ.ಶ. 1895), ವೆಸ್ಲಿಯನ್ ಪಂಥಕ್ಕೆ ಸೇರಿದ ಹಡ್ಸ್‍ನ್ ಮೆತೋರಿಯಲ್ ಚರ್ಚ್ ಲಂಡನ್ ಮಿಷನ್ ಪಂಥಕ್ಕೆ ಸೇರಿದೆ. ಅನೇಕ ಚರ್ಚುಗಳು ಗಮನಾರ್ಹವಾಗಿವೆ. ಇವುಗಳೇ ಅಲ್ಲದೆ, ಕೋಲಾರದ ಚಿನ್ನದ ಗಣಿ ಪ್ರದೇಶಗಳಲ್ಲಿ ಕೇಂದ್ರ ಕಚೇರಿಯನ್ನು ಹೊಂದಿದ ರೋಮನ್ ಕ್ಯಾತೊಲಿಕ್ ಪಂಥದವರು ಉಪಯೋಗಿಸುತ್ತಿರುವ ಬೆಂಗಳೂರು ಕೋಟೆಯಲ್ಲಿನ ಸಣ್ಣ ಚರ್ಚನ್ನು ಕಲ್ಕತ್ತೆಯ ಧರ್ಮಾಧಿಕಾರಿ ಟರ್ನರ್ ಕ್ರಿ.ಶ. 1830ರಲ್ಲಿ ಜನತೆಗೆ ಅರ್ಪಿಸಿದರು.

ಬೆಂಗಳೂರಿನಲ್ಲಿರುವ ಸೇಂಟ್ ಜೋಸೆಫ್ ಚರ್ಚು ಬೃಹದಾಕಾರದ ಚರ್ಚುಗಳಲ್ಲಿ ಒಂದಾಗಿದ್ದು ಶಿಲುಬೆಯ ಆಕಾರದ ಯೋಜನೆಯನ್ನು ಹೊಂದಿದೆ. ಮೊದಮೊದಲಿನ ಚರ್ಚುಗಳು ಸಾಮಾನ್ಯವಾಗಿ ಆರಂಭಕಾಲದ ಗಾತಿಕ್ ಶೈಲಿಯಲ್ಲಿ ರಚಿತವಾದವು. ಕ್ರಿ.ಶ. 12 ಮತ್ತು 15ನೆಯ ಶತಮಾನಗಳ ನಡುವಣ ಅವಧಿಯಲ್ಲಿ ಫ್ರಾನ್ಸ್ ಮತ್ತು ಉತ್ತರ ಯೂರೋಪ್‍ಗಳಲ್ಲಿ ಈ ಶೈಲಿ ಪ್ರಚಲಿತವಾಗಿತ್ತು. ಈ ಬಗೆಯ ಚರ್ಚುಗಳು ವಿಶಾಲವಾದ ಕಮಾನುಗಳನ್ನೂ ಬದಿಯ ಒತ್ತುಗೋಡೆಗಳನ್ನೂ ಹೊಂದಿರುತ್ತವೆ. ಈ ಒತ್ತುಗೋಡೆಗಳು ನಾಲ್ಕು ಬೆರಳುಗಾತ್ರದ ಮೇಲು ಫಲಕಗಳನ್ನೂ ಒಂದರ ತರುವಾಯ ಒಂದರಂತೆ ಪರ್ಯಾಯವಾಗಿ ಬರುವ ಪ್ರಾಚೀನ ಮುಖವಾಡದ ಮುಂಭಾಗಗಳನ್ನೂ ಹೊಂದಿರುತ್ತವೆ. ಮಧ್ಯಾಂಗಣ ಸಾಕಷ್ಟು ವಿಶಾಲವಾಗಿರುತ್ತದೆ. ಬದಿಯ ಹಜಾರಗಳು ಕಿರಿದಾಗಿರುತ್ತವೆ. ಬೃಹದಾಕಾರದ ಕಮಾನು ಛಾವಣಿಗಳು ಮತ್ತು ಸ್ತಂಭಗಳು ಸ್ವಲ್ಪ ಎತ್ತರವೆಂದು ತೋರುವ ಛಾವಣಿಗೆ ಆಸರೆಯನ್ನೊದಗಿಸುತ್ತವೆ. ಉತ್ತರ ಗಾತಿಕ್ ಶೈಲಿಯ ಕಟ್ಟಡಗಳಲ್ಲಿ ಚರ್ಚಿನ ವೇದಿಕೆಯ ಹಿನ್ನೆಲೆಯಲ್ಲಿ ಕಲ್ಲಿನ ಕೆತ್ತನೆಯನ್ನುಳ್ಳ ಎತ್ತರವಾದ ಗೋಡೆ ಇರುತ್ತದೆ. ಈ ಕೆತ್ತನೆಯ ಲಂಬರೇಖೆಗಳು ಮುಖ್ಯ ಕಟ್ಟಡದ ರಚನೆಯೊಂದಿಗೆ ಸಮರಸವಾಗಿ ಹೊಂದಿಕೊಂಡಿರುತ್ತವೆ. ಹಾಗೂ ವೇದಿಕೆಯ ಮೇಜಿಗೆ ಆವರಣವನ್ನೊದಗಿಸುತ್ತದೆ.

ಈಚಿನ ಚರ್ಚುಗಳನ್ನು ಮೂಲ ಗಾತಿಕ್ ಶೈಲಿಯಲ್ಲಿ ಕಟ್ಟಲಾಗಿದೆ. ಉದಾಹರಣೆಗೆ ಮೈಸೂರಿನಲ್ಲಿರುವ ಸೇಂಟ್ ಫಿಲೋಮಿನಾ ಚರ್ಚ್. ಇದು ಅಸ್ತಿತ್ವಕ್ಕೆ ಬರಲು ನಾಲ್ವಡಿ ಮೈಸೂರು ಅರಸರ ಆಪ್ತ ಕಾರ್ಯದರ್ಶಿಗಳಾಗಿದ್ದ ಸರ್ ತಂಬೂ ಚೆತ್ರಯವರೂ ಹಾಗೂ ಫಾದರ್ ಫ್ಯೂಗ ಅವರ ಶ್ರದ್ಧೆ ಮತ್ತು ಉತ್ಸಾಹಗಳೇ ಕಾರಣವಾದವು. ಈತ ಬೆಂಗಳೂರಿಗೆ ಬಂದ ಮೊದಲ ಕ್ರೈಸ್ತ ಧರ್ಮಾಧಿಕಾರಿ. ಕ್ರಿ. ಶ. 1933ರಲ್ಲಿ ಅಂದಿನ ಮೈಸೂರು ಮಹಾರಾಜರಾಗಿದ್ದ ಶ್ರೀ ಕೃಷ್ಣರಾಜ ಒಡೆಯರ್ ಅವರು ಚರ್ಚಿನ ಶಂಕುಸ್ಥಾಪನೆ ಮಾಡಿದರು. ಇದು ಒಟ್ಟಾರೆ 165ಅಡಿ ಎತ್ತರವಿದ್ದು, ಜೋಡಿಗೋಪುರಗಳೂ ಅಷ್ಟೇ ಎತ್ತರವಾಗಿವೆ. 1938ರಲ್ಲಿ ಇದರ ನಿರ್ಮಾಣಕಾರ್ಯ ಪೂರ್ಣವಾಯಿತು. ಫ್ಯೂಗ ಅವರು ಮೈಸೂರಿನ ಕ್ರೈಸ್ತಧರ್ಮಾಧಿಕಾರಿಯಾದಾಗ (1941) ಕಟ್ಟಡ ಪೂರ್ಣಗೊಂಡಿತು. ಇದು ಮೈಸೂರಿನ ಇತ್ತೀಚಿನ ಹಾಗೂ ಅತ್ಯಂತ ಕಲಾತ್ಮಕವಾದ ಚರ್ಚ್. ಇದರ ನೆಲಮನೆಯಲ್ಲಿರುವ ಸಮಾಧಿಗುಹೆಗಳು ಬಹು ಪ್ರಸಿದ್ಧವಾಗಿವೆ.       (ಕೆ.ವಿ.ಎಸ್.ಆರ್.)
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ